‘ಆಶಾ’ಗಳೆಂಬ ‘ಗುಲಾಬಿ’ಗಳು!-ರಾಜೇಶ್ ರೈ ಚಟ್ಲ

ಆರೋಗ್ಯ ಇಲಾಖೆ ಎಂಬ ದೊಡ್ಡ ಆಲದ ಮರದ ಬೇರುಗಳು ಈ ‘ಆಶಾ’ಗಳು. ಸಮಾಜಮುಖಿ ಚಟುವಟಿಕೆಯ ಮಧ್ಯೆ ನಿತ್ಯವೂ ಅರಳಿ ಮುದುಡುವ ಗುಲಾಬಿಗಳು. ಜಗತ್ತಿನಲ್ಲಿ ಅತಿ ಹೆಚ್ಚು ಸಾಮೂಹಿಕ ಆರೋಗ್ಯ ಕಾರ್ಯಕರ್ತೆಯರಿರುವ ಯೋಜನೆ ಎಂಬ ಹೆಗ್ಗಳಿಕೆಯ ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ’ದ ಆಧಾರಸ್ತಂಭಗಳು!

ಆಶಾ ಅಂದರೆ ‘ಅಕ್ರೆಡಿಟೆಡ್ ಸೋಷಿಯಲ್ ಹೆಲ್ತ್ ಆಕ್ಟಿವಿಸ್ಟ್’ (ASHA). ಕೇಂದ್ರ ಸರ್ಕಾರದ ‘ರಾಷ್ಟ್ರೀಯ  ಆರೋಗ್ಯ ಅಭಿಯಾನ ಯೋಜನೆ’ ಅಡಿಯಲ್ಲಿ 2005ರಲ್ಲಿ ಆಶಾ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ರಾಜ್ಯದಲ್ಲಿ 2008-09ರಿಂದ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಡಿ ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 35 ಸಾವಿರಕ್ಕೂ ಹೆಚ್ಚು, ಪ್ರತಿ 2000 ಜನಸಂಖ್ಯೆಗೆ ಒಬ್ಬರಂತೆ, ನಗರ ಕೊಳಚೆಪ್ರದೇಶಗಳಲ್ಲಿ  3000ಕ್ಕೂ ಹೆಚ್ಚು, ಒಟ್ಟು  ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಆಶಾಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕನಿಷ್ಠ ಎಂಟನೇ ತರಗತಿ ಓದಿರುವ ಆಯಾ ಗ್ರಾಮಗಳ ಹೆಣ್ಣು ಮಗಳೇ ಈ ತಾರೆಯರು.

‘ಆಶಾ’ ಕಾರ್ಯಕರ್ತೆಯರ ಕಾರ್ಯಕ್ಷೇತ್ರಕ್ಕೆ ನಿಗದಿತ ಚೌಕಟ್ಟಿಲ್ಲ. ಹಲವು ಕಾರ್ಯವಿಧಾನಗಳನ್ನು ಅನುಸರಿಸಿ ಕೆಲಸ ಮಾಡಬೇಕು. ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಆಶಾಗಳು ಸುರಕ್ಷಿತ ಹೆರಿಗೆ, ಆರೋಗ್ಯವಂತ ಶಿಶುವಿನ ಜನನ, ಆರೈಕೆ ಹಾಗೂ ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಿರತ ಶ್ರಮಿಸುತ್ತಿದ್ದಾರೆ. ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಯಲ್ಲಿ ಇವರದ್ದು ಮೌನಕ್ರಾಂತಿ.

ಆದರೆ, ಈ ಹೆಣ್ಣುಮಕ್ಕಳನ್ನು ಸರ್ಕಾರ ಅನುಕೂಲಕ್ಕಾಗಿ ಬಳಸಿಕೊಂಡು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎನ್ನುವುದು ದೊಡ್ಡ ಅಪವಾದ ಮತ್ತು ನೋವಿನ ಸಂಗತಿ. ಆಕೆ ಕೂಡಾ ಮೂಕಳಂತೆ ಏನನ್ನೂ ಪ್ರಶ್ನಿಸದೆ ತನ್ನ ಪಾಡಿಗೆ ದುಡಿಯುತ್ತಾಳೆ. ‘ಈ ಪಾಟಿ ದುಡಿದೂ ನೆಟ್ಟಗೆ ಕಾಸು ಕೊಡಲ್ಲ ಅಂದರೆ ಇದ್ಯಾವ ಸೀಮೆ ದುಡಿಮೆ?’ ಎನ್ನುವುದು ಈ ಜೀವಗಳ ಬೆನ್ನ ಹಿಂದೆ ನಿಂತ ಕಾರ್ಮಿಕ ಪರ ಸಂಘಟನೆಗಳ, ಸಾಮಾಜಿಕ ಚಿಂತಕರ ಆಕ್ರೋಶ.

ತಳಸಮುದಾಯಗಳ ಕುಟುಂಬಕ್ಕೆ ಸೇರಿದ 25-50 ವಯೋಮಾನದವರು ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಆಶಾ ಕಾರ್ಯಕರ್ತೆಯರಾಗಿದ್ದಾರೆ. ವಿಧವೆಯರು, ಪತಿಯ ಮರಣಾ ನಂತರ ಮಕ್ಕಳ ಜವಾಬ್ದಾರಿ ಹೊತ್ತ ತಾಯಂದಿರು, 5-6 ಜನ ಸದಸ್ಯರಿರುವ ಸಂಸಾರದ ನೊಗ ಹೊತ್ತ ಮಹಿಳೆಯರು, ಗಂಡ ತೊರೆದು ಹೋದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ವೃತ್ತಿಯಲ್ಲಿದ್ದಾರೆ. ಅನೇಕ ಒಂಟಿ ಜೀವಿಗಳೂ ಇದ್ದಾರೆ. ಈ ಪೈಕಿ ಬಹುತೇಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರು. ಬದುಕು ಈಗ ಬಲು ದುಬಾರಿ. ಮಕ್ಕಳ ಶಿಕ್ಷಣ, ಸಾರಿಗೆ, ಆರೋಗ್ಯ ವೆಚ್ಚ, ಬೆಲೆ ಏರಿಕೆಯಿಂದ ಜೀವನ ಸಾಗಿಸುವುದು ಸುಲಭವಲ್ಲ. ದಿನದ ಬದುಕು ಹಸನಾಗಿಸಲು ಹಲ್ಲುಮುಡಿ ಕಚ್ಚಿ ಹೆಣಗುತ್ತಿದ್ದಾರೆ.

ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ‘ಆಶಾ’ಗಳಾಗಿ ನೇಮಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲಾಗುತ್ತದೆ ಎನ್ನುವುದು ಸರ್ಕಾರದ ಘೋಷಣೆ. ಆದರೆ, ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲ ಎಂಬುದು ವಾಸ್ತವ. ನಿಗದಿತ ವೇತನ ಇಲ್ಲ. ಪ್ರತಿ ಪ್ರಕರಣಕ್ಕೆ ಇಂತಿಷ್ಟು ಪ್ರೋತ್ಸಾಹ ಧನ ನಿಗದಿಪಡಿಸಲಾಗಿದೆ. ಆದರೆ, ತಿಂಗಳಿಡೀ ದುಡಿದರೂ ನಿರೀಕ್ಷಿತ ಹಣ ಬರುತ್ತದೆ ಎಂಬ ವಿಶ್ವಾಸ ಇಲ್ಲ. ಪ್ರತಿ ತಿಂಗಳು ನಿಗದಿತ ದಿನದ ಎಲ್ಲಾ ಕಾಂಪೋನೆಂಟ್‍ಗಳ ಪ್ರೋತ್ಸಾಹ ಧನ ನೀಡದೆ, ನಂತರ ಎಂದೋ ಒಮ್ಮೆಗೆ ನೀಡುವಾಗ, ನಿರ್ವಹಿಸಿದ ಕೆಲಸಗಳಲ್ಲಿ ಯಾವುದು ಬಿಟ್ಟಿರುತ್ತಾರೆ ಎಂಬುದೂ ತಿಳಿಯುವುದಿಲ್ಲ ಎನ್ನುವ ಅಹವಾಲು ಆಶಾಗಳದ್ದು.

ಆಶಾ ಕಾರ್ಯಕರ್ತೆಯರಿಂದ ಅವಿರತವಾಗಿ ಒಂದಿಲ್ಲೊಂದು ಸರ್ವೆ ಮಾಡಿಸಲಾಗುತ್ತಿದೆ. ಡೆಂಗ್ಯೂ ಹರಡಿದರಂತೂ  ಪ್ರತಿ ದಿನ ಮನೆ-ಮನೆಗೆ ತೆರಳಿ ಅಡುಗೆಮನೆ, ಸ್ನಾನದ ಕೊಠಡಿ, ಶೌಚಾಲಯದಲ್ಲಿರುವ ನೀರು ಶೇಖರಣೆಯ ಪಾತ್ರೆ-ವಸ್ತುಗಳನ್ನು ಬ್ಯಾಟರಿಯಿಂದ ಪರೀಕ್ಷಿಸಿ, ಶುಭ್ರವಾಗಿಲ್ಲದಿದ್ದರೆ ಸ್ವಚ್ಛ ಮಾಡಿಸಿ ಅರಿವು ನೀಡಿ ದಾಖಲಿಸಿಕೊಳ್ಳಬೇಕು. ತಿಂಗಳಲ್ಲಿ 2-3 ಬಾರಿ ಲಾರ್ವಾ ಸರ್ವೆ ಮಾಡಿ ವರದಿ ಸಲ್ಲಿಸಬೇಕು. ಒಬ್ಬ ಆಶಾ ತನ್ನ ವ್ಯಾಪ್ತಿಯ ಮನೆಗಳನ್ನು ಸರ್ವೆ ಮಾಡಲು 4-12 ದಿನಗಳು ಬೇಕಾದಾಗಲೂ ಪ್ರೋತ್ಸಾಹಧನ ತಿಂಗಳಿಗೆ ₹200! ಇದೆ. ಆದರೆ ವರ್ಷಗಟ್ಟಲೆ ಇದಕ್ಕೆ ನಿಗದಿಯಾದ ಹಣವೇ ಬಂದಿರುವುದಿಲ್ಲ. ಸಂಪೂರ್ಣವಾಗಿ ಬಿಟ್ಟಿ ಕೆಲಸ ಮಾಡಬೇಕು, ಹಣ ನೀಡದಿರುವುದರಿಂದ ಸರ್ವೇ ಮಾಡಲಾಗುವುದಿಲ್ಲವೆಂದರೆ ಇವರ ಮೇಲಿನ ಸಿಬ್ಬಂದಿಗಳಿಂದ ಸಿದ್ಧ ಉತ್ತರ ‘ಕೆಲಸ ಬಿಟ್ಟುಬಿಡಿ’ ಎನ್ನುವುದು! ರಾಜ್ಯ ಸರ್ಕಾರದಿಂದ ಮೊನ್ನೆಯಷ್ಟೇ  ರೂ 3500 ನಿಗದಿಯಾದ ಮೇಲಂತೂ ‘ಇಷ್ಟೊಂದು ಹಣ ನೀಡುತ್ತಿಲ್ಲವೇ, ಬಾಯಿಮುಚ್ಚಿಕೊಂಡು ಎಲ್ಲ ಕೆಲಸ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ. ಈ ಎಲ್ಲ ಕೆಲಸಗಳ ಮಧ್ಯೆ, ಒಂದಿಲ್ಲೊಂದು ಸರ್ವೆ ಕಾರ್ಯ ನಿರಂತರ ನಡೆದೇ ಇರುತ್ತದೆ!  ಕೆಲವೆಡೆ ಹೆರಿಗೆ ಕೊಠಡಿಯಲ್ಲಿ ಏಪ್ರನ್, ಗ್ಲೌಸ್, ಚಪ್ಪಲಿ ಇಲ್ಲದೆ ನವಜಾತ ಶಿಶು ಮತ್ತು ಬಾಣಂತಿಯ ಆರೈಕೆಯನ್ನು ಆಶಾಗಳಿಂದ ಮಾಡಿಸಲಾಗುತ್ತದೆ. ದಾದಿಯರು ಮಾಡಬೇಕಾದ ಕೆಲಸವನ್ನು ತರಬೇತಿ ಇಲ್ಲದ ಆಶಾಗಳಿಂದ ಮಾಡಿಸಿದರೆ ಹೇಗೆ? ಎನ್ನುವುದು ಪ್ರಶ್ನೆ. ಇವರು ಸೇವೆಗಿಳಿದ ನಂತರ ದಾದಿಯರಿಗೆ ಕೆಲಸವೇ ಇಲ್ಲವೆಂದರೂ ಸರಿಯೇ!

‘ಮನೆ ಮನೆ ಸುತ್ತಾಡಿ ಜನರ ಆರೋಗ್ಯ ಸಂಬಂಧಿ ವಿಷಯಗಳಿಗೆ ಸ್ಪಂದಿಸುವ ಆಶಾಗಳ ಸೇವೆಯ ಮಹತ್ವ ಹಳ್ಳಿಗರಿಗೆ ಚೆನ್ನಾಗಿ ಗೊತ್ತು. ಗ್ರಾಮ ನೈರ್ಮಲ್ಯಕ್ಕಾಗಿ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಅವರು ಕೆಲಸ ಮಾಡುತ್ತಾರೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕೊಂಡೊಯ್ಯುವುದಲ್ಲದೆ, ಶುಶ್ರೂಷೆ, ಔಷಧಿ ತಾವೇ ಕೊಡಿಸುತ್ತಿದ್ದಾರೆ. ಎಷ್ಟೋ ವೇಳೆ ತುರ್ತು ಸಂದರ್ಭಗಳಲ್ಲಿ ಸ್ವತಃ ರಕ್ತ ನೀಡಿ ಬದುಕಿಸಿದ ನಿದರ್ಶನಗಳೂ ಇವೆ. ಶಿಕ್ಷಣದ ಅಗತ್ಯ, ಬಾಲ್ಯ ವಿವಾಹದ ದುಷ್ಪರಿಣಾಮ, ಹೆಣ್ಣು ಭ್ರೂಣ ಹತ್ಯೆ ಪಿಡುಗಿನ ಕುರಿತೂ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಬಹುತೇಕ ಆಸ್ಪತ್ರೆಗಳಲ್ಲಿ ಗೌರವವನ್ನೂ ನೀಡದೆ ಕನಿಷ್ಠವಾಗಿ ನಡೆಸಿಕೊಳ್ಳುತ್ತಿರುವುದು ನೋವಿನ ಸಂಗತಿ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ.

ಆಶಾಗಳು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ ಬಳಿಕ ಸಾಂಸ್ಥಿಕ ಹೆರಿಗೆ ಪ್ರಮಾಣ ಹೆಚ್ಚಿದೆ. ತಾಯಿ ಶಿಶು ಮರಣ ಪ್ರಮಾಣ ಗಣನೀಯವಾಗಿ ಕುಸಿದಿದೆ. ಗ್ರಾಮ ಹಾಗೂ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿದೆ. ಆಸ್ಪತ್ರೆಗಳಿಗೆ ತೆರಳಿ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಬಾಣಂತಿ ಮತ್ತು ಮಗುವಿನ ಸುರಕ್ಷತೆ, ಲಸಿಕಾ ಕಾರ್ಯಕ್ರಮಗಳ ವಿವರ, ಅಪೌಷ್ಟಿಕತೆಗೆ ಚಿಕಿತ್ಸೆ ಪಡೆಯಬೇಕೆಂಬ ತಿಳಿವಳಿಕೆ ಕಣ್ಣಿಗೆ ಕಾಣುವಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಇದನ್ನು ಆರೋಗ್ಯಾಧಿಕಾರಿಗಳೇ ಒಪ್ಪುತ್ತಾರೆ. ಸರ್ಕಾರ ವರದಿಗಳು, ಅಂಕಿ–ಅಂಶಗಳೂ ಈ ಗುಣಾತ್ಮಕ ಬದಲಾವಣೆಗಳಿಗೆ ಕನ್ನಡಿ ಹಿಡಿಯುತ್ತವೆ ಎಂದೂ ಅವರು ಹೇಳುತ್ತಾರೆ.

‘ಕಷ್ಟವಿದ್ದರೂ, ಸಂಸಾರಕ್ಕೆ ಆಧಾರವಾದೀತು, ಏನೋ ಒಂದು ಸರ್ಕಾರಿ ಕೆಲಸ. ಇಂದಲ್ಲ ನಾಳೆ ಹೊಟ್ಟೆ ತುಂಬುವಷ್ಟಾದರೂ ಸರ್ಕಾರ ವೇತನ ನೀಡಬಹುದು ಎಂಬ ನಿರೀಕ್ಷೆಯೊಂದಿಗೆ ದುಡಿಯುತ್ತಿದ್ದೇವೆ’ ಎಂಬುದು ಈ ತಾಯಂದಿರ ಅಳಲು. ಈಗಲಾದರೂ ಈ ಸಂಕಟದ ಮೊರೆ ಸರ್ಕಾರಗಳಿಗೆ  ಕೇಳೀತೆ?

ಆಶಾಗಳ ಆಶಾಕಿರಣ…

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಪ್ರತಿ ಜಿಲ್ಲೆಯಲ್ಲಿ ಘಟಕ ಹೊಂದಿದೆ. ಆಶಾಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಾವೇಶ, ಮೆರವಣಿಗೆ, ವಿಚಾರ ಸಂಕಿರಣಗಳ ಮೂಲಕ ಹೋರಾಟ, ಪ್ರತಿಭಟನೆ ಹಮ್ಮಿಕೊಳ್ಳುವ ಈ ಸಂಘಟನೆ, ಈ ವರ್ಗದ ಆಶಾಕಿರಣ.

ಆಶಾ ಕಾರ್ಯಕರ್ತೆಯರ ಚಟುವಟಿಕೆ, ಬದುಕು–ಬವಣೆಯ, ಆಳ– ಅಗಲ, ಅದರಿಂದ ಆರೋಗ್ಯ ಇಲಾಖೆ ಮತ್ತು ಸರ್ಕಾರ ಗಳಿಸಿರುವ ಯಶಸ್ಸು ಎಲ್ಲವನ್ನೂ ಈ ಸಂಘ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದೆ. ಈ ‘ಗುಲಾಬಿ’ಗಳು (ಸಮವಸ್ತ್ರ ಗುಲಾಬಿ ಬಣ್ಣದ ಸೀರೆ) ಎದುರಿಸುತ್ತಿರುವ ಸಮಸ್ಯೆ, ಅನುಭವಿಸುತ್ತಿರುವ ನೋವುಗಳ ಕಡೆಗೆ ಈ ವರದಿ ಬೆಳಕು ಚೆಲ್ಲಿದೆ. ಆ ಮೂಲಕ ಸಮಾಜದ, ಸರ್ಕಾರದ ಕಣ್ಣು ತೆರೆಸಲು ನಿರಂತರ ಹೋರಾಟ ಮಾಡುತ್ತಿದೆ.

ಇವರಿಗೆ ಸುಮಾರು 34 ಮಾಸಿಕ ನಿಗದಿತ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದ್ದು, ಪ್ರತಿಯೊಂದು ಕಾರ್ಯಕ್ರಮಕ್ಕೆ ಇಂತಿಷ್ಟು ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಿಂದ ತಿಂಗಳಿಗೆ ₹ 1,500ದಿಂದ ₹ 2,500 ದೊರೆಯುತ್ತಿದ್ದು, ನಿರಂತರ ಹೋರಾಟದ ಫಲವಾಗಿ 2017 ಸೆಪ್ಟೆಂಬರ್ ತಿಂಗಳಿಂದ ಕರ್ನಾಟಕ ಸರ್ಕಾರ ₹ 3,500 ನಿಗದಿತ ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಹಲವು ಜಿಲ್ಲೆಗಳ ಕಾರ್ಯಕರ್ತೆಯರಿಗೆ ಈ ಪ್ರೋತ್ಸಾಹಧನ ಸಮರ್ಪಕವಾಗಿ ತಲುಪದೇ ಗೋಳಾಡುವಂತಾಗಿರುವುದು ವಿಪರ್ಯಾಸ. ಇಲ್ಲೂ ಮತ್ತೆ ಆರೋಗ್ಯ ಇಲಾಖೆ, ಖಜಾನೆ ಇಲಾಖೆ, ಬ್ಯಾಂಕ್  ಗಳ ಅಸಹಕಾರದಿಂದಾಗಿ ಇವರ ಸಮಸ್ಯೆಗಳು ಮುಗಿಲುಮುಟ್ಟುವಂತಾಗಿದೆ.  ಇದನ್ನು ಸರಿಪಡಿಸಿ, ನಮ್ಮ ಹೊಟ್ಟೆಗೆ ಹೊಡೆಯಬೇಡಿರೆಂದು ಅವರು ಕೈ ಮುಗಿದು ಕೇಳುತ್ತಿದ್ದಾರೆ. ಸಂಘ ಅವರ ಅಳಲು ಸರ್ಕಾರಗಳಿಗೆ ಮುಟ್ಟಿಸಲು ಹಗಲಿರುಳೂ ಶ್ರಮಿಸುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ತಾಯಿ–ಶಿಶು ಮರಣ, ಮನೆ ಹೆರಿಗೆ (ಅಸುರಕ್ಷಿತ ಹೆರಿಗೆ) ಪ್ರಮಾಣ ಭಯ ಹುಟ್ಟಿಸುವಂಥ ದಿನಗಳಿದ್ದವು. ಪ್ರತಿ 1,000 ಶಿಶು ಜನನಕ್ಕೆ 47 ಶಿಶು ಸಾವು ಸಂಭವಿಸುತ್ತಿತ್ತು. ಅಪೌಷ್ಟಿಕತೆ ನಿವಾರಣೆಯಾಗುವುದಿರಲಿ 0-5 ವಯೋಮಾನದ ಮಕ್ಕಳಲ್ಲಿ ಶೇ 50ರಷ್ಟು ಮಂದಿ ಅಪೌಷ್ಟಿಕತೆಯಿಂದ ನರಳುತ್ತಿದ್ದರು. ತಾಯಿ ಮರಣವೂ ಚಿಂತಿಸುವ ಮಟ್ಟದಲ್ಲಿತ್ತು. 2005 ಕ್ಕೆ ಹೋಲಿಸಿದರೆ ತಾಯಿ– ಶಿಶು ಮರಣ ಹಾಗೂ ತಾಯಿ ಮರಣ ಈಗ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಸಾವಿನ ಪ್ರಮಾಣ 1000ಕ್ಕೆ 30ಕ್ಕಿಂತ ಕಡಿಮೆಗೆ ಬಂದಿದೆ. ಈ ಗುಣಾತ್ಮಕ ಬದಲಾವಣೆಗೆ ಕಾರಣ ಆಶಾ ಕಾರ್ಯಕರ್ತೆಯರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಾಹಿತಿ ಪ್ರಕಾರ, ಆಶಾ ಕಾರ್ಯಕರ್ತೆಯರ ನೇಮಕಕ್ಕೂ  ಮೊದಲು ಅಂದರೆ, 2005 ರಲ್ಲಿ ದೇಶದಲ್ಲಿ ತಾಯಿ ಮರಣ ಪ್ರಮಾಣ ಒಂದು ಲಕ್ಷಕ್ಕೆ 212 ಇದ್ದರೆ, ಆಶಾ ಕಾರ್ಯಕರ್ತೆಯರ ನೇಮಕದ ಬಳಿಕ ಆ ಪ್ರಮಾಣ 133ಕ್ಕೆ ಇಳಿದಿದೆ. ಗರ್ಭಿಣಿಯರ ಆರೈಕೆ, ಚುಚ್ಚು ಮದ್ದು ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ, ಗ್ರಾಮಾಂತರ ಪ್ರದೇಶಗಳಲ್ಲಿ ಬಯಲು ಶೌಚ ಮುಕ್ತಗೊಳಿಸುವಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆ ಹೆರಿಗೆಯನ್ನು ಪ್ರೋತ್ಸಾಹಿಸಲು ಆಶಾ ಕಾರ್ಯಕರ್ತೆಯರು ದಿನವಿಡೀ ಶ್ರಮಿಸುತ್ತಿದ್ದಾರೆ. ಅದರ ಪರಿಣಾಮ ಈಗ ಆಸ್ಪತ್ರೆ ಹೆರಿಗೆ ಪ್ರಮಾಣ ಶೇ 96ರಷ್ಟಾಗಿದ್ದು, ಗಣನೀಯ ಅಭಿವೃದ್ಧಿ ಕಂಡಿದೆ ಎಂದೂ ಅಂಕಿಅಂಶ ಹೇಳುತ್ತದೆ.

ಆಶಾ ಸಾಫ್ಟ್ ಎಂಬ ಕಿರುಕುಳ!
ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಕಧನ ವಿತರಿಸಲು ರಾಜ್ಯ ಸರ್ಕಾರ ‘ಆಶಾ ಸಾಫ್ಟ್’ ಎಂಬ ತಂತ್ರಾಂಶ ಅಳವಡಿಸಿದೆ. ನಿಗದಿತ ದಿನ ನಿಯಮಿತವಾಗಿ ಪ್ರೋತ್ಸಾಹಧನ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂಬುದು ಅಧಿಕಾರಿಗಳ ಸಮರ್ಥನೆ. ಆಶಾಗಳು ಮಾಡಿದ ಕೆಲಸದ ವಿವರಗಳನ್ನು ಈ ತಂತ್ರಾಂಶದಲ್ಲಿ ತುಂಬಬೇಕು.ಅದನ್ನು ತುಂಬುವ ವ್ಯವಸ್ಥೆ ಅಸಮರ್ಪಕವಾಗಿದೆ. ಸಿಬ್ಬಂದಿ ಕೊರತೆ, ಅವರಿರುವೆಡೆ ಅಸಹಕಾರ, ಮೂಲಸೌಕರ್ಯಗಳ ಕೊರತೆ, ಹಳ್ಳಿಗಳಲ್ಲಿ ವಿದ್ಯುತ್‌ ಕೊರತೆ, ತಂತ್ರಾಂಶದ ಲೋಪದೋಷಗಳು ಇವೆಲ್ಲವುಗಳಿಂದ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರಕದೆ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಮಾಸಿಕ ಶೇ 40ರಿಂದ ಶೇ 70ರಷ್ಟು ಮಾತ್ರ ಪ್ರೋತ್ಸಾಹಧನ ದೊರೆಯುತ್ತಿದೆ. ಉದಾಹರಣೆಗೆ ಒಬ್ಬ ಆಶಾ ಮಾಸಿಕ ₹ 3,000ದಷ್ಟು, ಮತ್ತೊಬ್ಬ ಆಶಾ ₹ 2,500 ಕೆಲಸ ಮಾಡಿರುವುದಕ್ಕೆ ಅಲ್ಲಿ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ಸಹಾಯಕರು ದೃಢೀಕರಿಸಿರುತ್ತಾರೆ. ಕ್ರಮವಾಗಿ ₹ 3,000, ₹ 2,500 ಗಳ ಬದಲಾಗಿ ₹ 1,500, ₹ 800 ಕೆಲಸಗಳು ಮಾತ್ರ ಸಾಫ್ಟ್‌ನಲ್ಲಿ ಫೀಡ್‍  ಆಗುತ್ತಿದೆ. ಉಳಿದ ಮಾಹಿತಿಯನ್ನು ಮುಂದಿನ ತಿಂಗಳಲ್ಲಿ ಫೀಡ್ ಮಾಡಲು ತಿಳಿಸಿರುತ್ತಾರೆ. ಮುಂದಿನ ತಿಂಗಳಲ್ಲಿ ಫೀಡ್ ಮಾಡಿದಾಗ ಸಹಾ ಸಂಪೂರ್ಣ ಮಾಹಿತಿ  ಸಾಫ್ಟ್ ಸ್ವೀಕರಿಸುತ್ತಿಲ್ಲ. ಬಹುತೇಕವಾಗಿ ಇದಕ್ಕೆ ಕಾರಣ ಎಂಸಿಟಿಎಸ್ ಅಪ್‍ಡೇಟ್‍ ಆಗದಿರುವುದು. ಎ.ಎನ್.ಎಮ್‍ ಅಥವಾ ಡೇಟಾ ಎಂಟ್ರಿ ಆಪರೇಟರ್‌ಗಳು ಎಂಸಿಟಿಎಸ್  ಅಪ್‍ಡೇಟ್ ಮಾಡುತ್ತಿಲ್ಲ. ಅಪ್‍ಡೇಟ್ ‍ಆಗದೆ ಆಶಾಗಳಿಗೆ ವೇತನವಿಲ್ಲ. ಇಲಾಖೆಯ ಅಧಿಕಾರಿಗಳು ಜಾರಿಗೊಳಿಸಿದ ಈ ಅವೈಜ್ಞಾನಿಕ ನೀತಿಯಿಂದಾಗಿ ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರು ಸಂಕಟ ಅನುಭವಿಸುವಂತಾಗಿದೆ. ಇದಕ್ಕೆ ತಕ್ಷಣವೇ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು.

ಇದವರ ಸಂಭಾವನೆ ….  ಸ್ಥಿತಿ …!

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುವ ಮಾಸಿಕ ಸಭೆಗೆ ಭಾಗವಹಿಸಿದರೆ ₹ 150, ಗರ್ಭಿಣಿ ಮಹಿಳೆಯನ್ನು ನೊಂದಾಯಿಸಿ ಹೆರಿಗೆ ಮುಂಚಿನ ಆರೋಗ್ಯ ಸೌಕರ್ಯಗಳನ್ನು ಒದಗಿಸಿಕೊಡಲು ಮತ್ತು ಚಿಕಿತ್ಸೆ ಕೊಡಿಸಿ ಸುರಕ್ಷಿತ ಹೆರಿಗೆ ಮಾಡಿಸಲು 9 ತಿಂಗಳುಗಳ ಶ್ರಮಕ್ಕೆ ₹ 300, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿದರೆ ₹ 300, ಸರ್ಕಾರದಿಂದ ನಿಗದಿಯಾದ ಇಂತಹ 34 ಕೆಲಸಗಳನ್ನು ಕಾಂಪೊನೆಂಟ್‍ಗಳಾಗಿ ಆಶಾಗಳು ನಿರ್ವಹಿಸಬೇಕು!

ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ತಿಂಗಳಿಗೆ ₹ 100.  ಹಿಂದಿನ ದಿನ ಆ ಮಕ್ಕಳನ್ನು ಕರೆತರಲು ಪೋಷಕರಿಗೆ ತಿಳಿಸಬೇಕು, ಮಕ್ಕಳು ಬರದಿದ್ದ ಸಮಯದಲ್ಲಿ ಮತ್ತೇ ಮನೆಗಳಿಗೆ ಹೋಗಿ ಕರೆತರಬೇಕು. ಕೆಲವು ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಲಸಿಕಾ ಡಬ್ಬಿ ಗ್ರಾಮಕ್ಕೆ ತರಬೇಕು. ಮತ್ತೆ ಗ್ರಾಮದಿಂದ ಆಸ್ಪತ್ರೆಗೆ ವಾಪಸ್ ತಲುಪಿಸಬೇಕು. ಕೆಲಕಡೆ ಆಸ್ಪತ್ರೆಯಿಂದ ಲಸಿಕೆ ಹಾಕುವ ಗ್ರಾಮ 4 ರಿಂದ 8 ಕಿ.ಮೀ ಇರುತ್ತದೆ.

ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಕುಡಿಯುವ ನೀರು, ಶೌಚಾಲಯ ಇರುವ ವಿಶ್ರಾಂತಿ ಕೊಠಡಿ ಒದಗಿಸಬೇಕು. ಈ ಬಗ್ಗೆ ಆದೇಶ ಇದ್ದರೂ ಪಾಲನೆ ಆಗುತ್ತಿಲ್ಲ. ಮಾಸಿಕ ಪ್ರೋತ್ಸಾಹಧನವನ್ನು ನಿಗದಿತ ದಿನದಂದು ನೀಡದೆ ಉಳಿಸಿಕೊಂಡರೆ ಆ ಜಿಲ್ಲೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಜವಾಬ್ದಾರರಾಗುತ್ತಾರೆ. ಆದರೆ ಅದನ್ನೂ ಕೇಳುವವರಿಲ್ಲ. ಅರ್ಥಾತ್‌, ಸಮರ್ಪಕವಾಗಿ ದಕ್ಕಲಾರದ ಹೆಸರಿಗಿರುವ ಗೌರವಧನಕ್ಕಾಗಿ ಒದ್ದಾಡುತ್ತಾ ಗೌರವ ಇಲ್ಲದೆ ದುಡಿಯುವ ಶ್ರಮ ಜೀವಿಗಳಾಗಿದ್ದಾರೆ ಇವರು.

‘ಪ್ರಭುತ್ವವು ಬೆಲೆ ಕಳೆದುಕೊಂಡ ತನ್ನ ಪ್ರಜೆಗಳನ್ನು ಬೀದಿಗೆ ಚೆಲ್ಲಿದಂತೆ!’


ಇತ್ತೀಚಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆಯ ಮೆರವಣಿಗೆಯ ಫೋಟೊ ಅದು. ಹಳ್ಳಿಹಳ್ಳಿ ಅಲೆಯುತ್ತ ಗ್ರಾಮೀಣ ಪ್ರದೇಶದ ಗರ್ಭಿಣಿ ಮಹಿಳೆ ಮಕ್ಕಳ ಆರೋಗ್ಯಕ್ಕೆ ನೆರವಾಗುತ್ತಾ, ಜೊತೆಗೆ ಸರ್ಕಾರ ಹೇಳುವ ಸರ್ವೆಗಿರ್ವೆ ಮುಂತಾಗಿ ಹತ್ತಾರು ಕೆಲಸ ನಿರ್ವಹಿಸುವ ತಮ್ಮ ಅಲೆದಾಟದ ದುಡಿಮೆಗೆ ತಿಂಗಳಿಗೆ ಕನಿಷ್ಠ ಐದಾರು ಸಾವಿರ ರೂಪಾಯಿಯಾದರೂ ಸಿಗಲಿ ಎಂಬ ಬೇಡಿಕೆಗಾಗಿ ಆ ಮೆರವಣಿಗೆ ನಡೆದಿತ್ತು. ಫರ್ಲಾಂಗುಗಟ್ಟಲೆ ಇದ್ದ ಒಂದು ಸೇತುವೆ ತುಂಬಾ ಚೂರೂ ಜಾಗ ಬಿಡದಂತೆ ತುಂಬಿಕೊಂಡಿದ್ದ ಮೆರವಣಿಗೆ ದೃಶ್ಯ ಆ ಫೋಟೊದಲ್ಲಿತ್ತು. ಆಶಾ ಕಾರ್ಯಕರ್ತೆಯರೆಲ್ಲರೂ ಒಂದೇ ಬಣ್ಣದ ಟೊಮೊಟೊ ಕಲರ್ ಸೀರೆ ತೊಟ್ಟಿದ್ದರು. ಆ ಫೋಟೊ ನೋಡಿ ಅಭಿರುಚಿ ಗಣೇಶ್ ‘ರಸ್ತೆ ಉದ್ದಕ್ಕೂ ಟೊಮೊಟೊ ಹಣ್ಣುಗಳನ್ನು ಚೆಲ್ಲಿದಂತೆ ಕಾಣುತ್ತಿದೆ’ ಅಂದ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬೆಚ್ಚಿದೆ. ಹೌದು, ಆ ರಸ್ತೆ ತುಂಬಾ ಫರ್ಲಾಂಗುಗಳ ಉದ್ದಕ್ಕೂ ರಾಶಿ ರಾಶಿ ಟೊಮೊಟೊ ಹಣ್ಣುಗಳನ್ನು ಚೆಲ್ಲಿದಂತೆಯೇ ಅದಿತ್ತು. ನಮ್ಮ ರೈತರು ಬೆಲೆ ಇಲ್ಲದ್ದಕ್ಕಾಗಿ ರೋಸಿ ಹೋಗಿ ತಾವು ಬೆಳೆದ ಟೊಮೊಟೊಗಳನ್ನು ರಸ್ತೆಗೆ ಸುರಿದು ತಮ್ಮ ಕಿಚ್ಚನ್ನು ಅಭಿವ್ಯಕ್ತಿಸುತ್ತಾರಲ್ಲಾ ಹೆಚ್ಚುಕಮ್ಮಿ ಇದೂ ಅದೇ ರೀತಿ ಕಾಣುತ್ತಿತ್ತು. ಪ್ರಭುತ್ವವು ಬೆಲೆ ಕಳೆದುಕೊಂಡ ತನ್ನ ಪ್ರಜೆಗಳನ್ನು ಬೀದಿಗೆ ಚೆಲ್ಲಿದಂತೆ ಆ ಆಶಾ ಕಾರ್ಯಕರ್ತೆಯರ ಮೆರವಣಿಗೆ ಕಾಣುತ್ತಿತ್ತು.
ದೇವನೂರ ಮಹಾದೇವ  ಸಾಹಿತಿಗಳು ಹಾಗೂ ಚಿಂತಕರು
(ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಪ್ರಶಸ್ತಿ-2016 ಸ್ವೀಕಾರ ಸಂದರ್ಭದಲ್ಲಿ)

‘ಈ ಆರೋಗ್ಯ ಮಾತೆಯರ ಅಳಲು ಸರ್ಕಾರ ಆಲಿಸಲಿ’

ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಈ ‘ಕೊಂಕಣ ಸುತ್ತಿ ಮೈಲಾರ ಸೇರುವ’ ಕಾಂಪೊನೆಂಟ್ ಮತ್ತು ‘ಆಶಾ ಸಾಫ್ಟ್’ ಪದ್ಧತಿ ರದ್ದುಗೊಳಿಸಿ ಅವರಿಗೆ ತಿಂಗಳಿಗೆ ರಾಜ್ಯ ಸರ್ಕಾರದಿಂದ ಮಾಸಿಕ  ಕನಿಷ್ಠ ₹ 6,000 ಗೌರವಧನ, ಮತ್ತು ಕೇಂದ್ರ ಸರ್ಕಾರದಿಂದಲೂ ಮಾಸಿಕ ನಿಗದಿತವಾಗಿ ₹ 6,000 ಗೌರವಧನ ನೀಡಿ ಕೆಲಸ ಮಾಡಿದಷ್ಟೂ ಪ್ರೋತ್ಸಾಹಧನ ನೀಡಿದರೆ ಖಂಡಿತಾ ಎರಡೂ‌ ಸರ್ಕಾರಗಳ ಗೌರವ ಹೆಚ್ಚುತ್ತದೆ. ಜೊತೆಗೆ ಕೆಲಸ ಮಾಡಿಯೂ ಸಮರ್ಪಕ ವೇತನವಿಲ್ಲದ್ದಕ್ಕೆ ಕುಟುಂಬದವರ ನಿಂದನೆ ತಪ್ಪುತ್ತದೆ. ಈಗ ಕೆಲಸವನ್ನೂ ಸಮರ್ಪಕವಾಗಿ ಮಾಡಲಾಗದೇ ಗೌರವಧನ ಪಡೆಯಲಿಕ್ಕಾಗಿಯೇ ದಿನ ನಿತ್ಯ ಅಲೆದಾಡುತ್ತಿರುವ ಸ್ಥಿತಿ ತಪ್ಪಿ, ನೆಮ್ಮದಿಯಾಗಿ ಇಲಾಖೆ  ವಹಿಸಿದ ಕೆಲಸ ನಿರ್ವಹಿಸುವುದು ಸಾಧ್ಯವಾಗುತ್ತದೆ. ಗ್ರಾಮೀಣ ಜನ ಸಮುದಾಯ ಮತ್ತು ಆರೋಗ್ಯ ಇಲಾಖೆ ಮಧ್ಯೆ ಸೇತುವೆಯಾಗಿ ದುಡಿಯುತ್ತಿರುವ ಈ ಆಶಾ ಕಾರ್ಯಕರ್ತೆಯರು ನಿಜಕ್ಕೂ ಗ್ರಾಮದ ಆರೋಗ್ಯ ಮಾತೆಯರು, ಹಗಲು ರಾತ್ರಿ ಎನ್ನದೇ, ಬೀದಿ ಬೀದಿ, ಮನೆ ಮನೆ ಸುತ್ತಿ ಸಮುದಾಯದ ಆರೋಗ್ಯಕ್ಕಾಗಿ  ವಿಷಮ ಪರಿಸ್ಥಿತಿಗಳಲ್ಲಿ ಅತ್ಯಂತ ನಿಕೃಷ್ಟ ಕೆಲಸವನ್ನೂ ಮಾಡುವ ಇವರಿಗೆ ತಕ್ಕ ಪ್ರತಿಫಲದ ವ್ಯವಸ್ಥೆ ಇಲ್ಲದಿರುವುದರಿಂದ ಇವರ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದೆ. ಇವರಲ್ಲಿ ಹೆಚ್ಚಿನವರು ತಳಸಮುದಾಯದವರು, ಕೆಳವರ್ಗದ ಮಹಿಳೆಯರು, ವಿಧವೆಯರು, ಗಂಡ ಬಿಟ್ಟವರು, ಶೋಷಿತರು ಎನ್ನುವುದು ನಿಜಕ್ಕೂ ಸರ್ಕಾರಗಳಿಗೆ ಅಂತಃಕರಣವಿದ್ದರೆ, ಅದರ ಕಣ್ಣು ತೆರೆಸಬೇಕು. ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಿಗೆ ಸ್ಕೂಟರ್ ಕೊಳ್ಳಲು 50000 ಬಡ್ಡಿರಹಿತ ಸಾಲ ಘೋಷಣೆಯಾಗಿದೆ. ನಿಜಕ್ಕೂ ಅದರ ಅವಶ್ಯಕತೆ ಬೀದಿ ಸುತ್ತಿ ಕೆಲಸ ನಿರ್ವಹಿಸಬೇಕಾದ ಪ್ರತಿ ಆಶಾ ಕಾರ್ಯಕರ್ತೆಯರಿಗೂ ಇದೆ. ಅದನ್ನು ಸರ್ಕಾರ ತಕ್ಷಣ ಜಾರಿ ಮಾಡಬೇಕು.
ಆಶಾ ಕಾರ್ಯಕರ್ತೆಯರ ಜ್ವಲಂತ ಸಮಸ್ಯೆಗಳು ಸರಿಯಾಗಿ ಅರ್ಥವಾಗಬೇಕೆಂದರೆ ನಮ್ಮ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹವಾನಿಯಂತ್ರಿತ ಕಚೇರಿ, ಕಾರು ಬಿಟ್ಟು ಕನಿಷ್ಠ ಒಂದು ವಾರ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಬೇಕು. ಆಗ ಒಂದಿದ್ದರೆ ಇನ್ನೊಂದಿಲ್ಲದ, ಸೌಕರ್ಯಗಳ ತೀವ್ರ ಕೊರತೆಯ  ಹಳ್ಳಿಗಳಲ್ಲಿ ತಾಯಿ, ಮಗುವಿನ ಜೀವ ಉಳಿಸಲು, ಜನರ ಆರೋಗ್ಯ ಕಾಪಾಡಲು ಇವರು ಪಡುವ ಪಡಿಪಾಟಲು ಅರ್ಥವಾದೀತು. ಈ ಕೆಲಸಗಳನ್ನು ನಾಲ್ಕು ದಿನ ಪುರುಷರ ಕೈಲ್ಲಿ ಮಾಡಿಸಲು ಸಾಧ್ಯವೇ? ಸರ್ಕಾರಗಳು ಯೋಚಿಸಬೇಕು. ತಿಂಗಳಿಗೆ ದುಡಿದಷ್ಟೂ ಹಣ ಬರುವುದೆಂದು ಆಶಾ ಯೋಜನೆ ಆರಂಭದಲ್ಲಿ ಹೇಳಲಾಗಿತ್ತು. ಆದರೆ ಈ ಕಾಂಪೊನೆಂಟ್ ವ್ಯವಸ್ಥೆ ಅತ್ಯಂತ ಕ್ಲಿಷ್ಟಕರ ಲೆಕ್ಕಾಚಾರವೂ ಹೌದು, ಅವೈಜ್ಞಾನಿಕವೂ ಹೌದು. ಇಂಥಹ ಪೀಸ್‍ವರ್ಕ್ ಲೆಕ್ಕಾಚಾರದ ಅಸಮರ್ಪಕ ಸರ್ಕಾರಿ ಯೋಜನೆ ಇನ್ನೊಂದಿಲ್ಲ. ‘ಆಶಾ ಸಾಫ್ಟ್’ ಆನ್‍ಲೈನ್ ವಿಧಾನ ಜಾರಿಯಾದಂದಿನಿಂದ ಅವರ ಬ್ಯಾಂಕ್ ಖಾತೆಗೆ ದುಡಿದಷ್ಟು ಹಣ ಜಮೆಯಾಗದೇ ಮೊದಲಿಗಿಂತ ದುಪ್ಪಟ್ಟು ಕಷ್ಟ ಪಡುವಂತಾಗಿದೆ. ಸರ್ಕಾರಗಳಿಗೆ ನಿಕೃಷ್ಟ ಕೆಲಸ ಮಾಡಲೂ ಹೆಣ್ಣು ಮಕ್ಕಳ ದುಡಿಮೆ ಬೇಕು. ಅದಕ್ಕೆ ತಕ್ಕ ಪ್ರತಿಫಲ ನೀಡುವುದಿಲ್ಲವೆಂದರೆ ಇದೆಂಥ ಘಾತುಕತೆ! ಆಶಾ ತಾಯಂದಿರ ಅಳಲನ್ನು ಇನ್ನಾದರೂ ಸರ್ಕಾರ ಆಲಿಸಬೇಕು. ಅವರಿಗೆ ಸೂಕ್ತ, ಸಮಾಧಾನಕರ ಪರಿಹಾರ ದೊರಕಿಸಿಕೊಡಬೇಕು.

 

ರೂಪ ಹಾಸನ
ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ

‘ಆಶಾ’ಗಳ ಬದುಕಿನತ್ತ ಸರ್ಕಾರ ಕಣ್ಣುಬಿಟ್ಟು ನೋಡಲಿ
ಗ್ರಾಮೀಣ ಜನರ ಬದುಕಿನಲ್ಲಿ ಆರೋಗ್ಯ ಸೇವೆ ಮೂಲಕ ಬೆಳಕು ಮೂಡಿಸುವ ಈ ಆಶಾಗಳ ಬದುಕು ಬೆಳಗಬೇಕು. ವೈಯಕ್ತಿಕ ಬದುಕು ಪಕ್ಕಕ್ಕಿಟ್ಟು ರೋಗಿಗಳಿಗಾಗಿ ದಿನವಿಡೀ ಸಮಯ ಕಾಪಿಡುವ ಆಶಾಗಳಿಗೆ ಉದ್ಯೋಗದ ಭರವಸೆಯಂತೂ ಇಲ್ಲವೇ ಇಲ್ಲ. ಕೊನೆ ಪಕ್ಷ ಪ್ರತೀ ತಿಂಗಳೂ ವೇತನವೂ ಇಲ್ಲ.  3-4 ತಿಂಗಳಿಗೊಮ್ಮೆ ನೀಡಿದರೆ ಬದುಕುವುದು ಹೇಗೆ? ಹಲವು ಸಂದರ್ಭಗಳಲ್ಲಿ ಹಳ್ಳಿಗಾಡಿನ ಜನರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತಗಲುವ ಖರ್ಚು, ಮತ್ತಿತರ ವೆಚ್ಚವನ್ನೂ ಅವರೇ ಭರಿಸಬೇಕು. ರೋಗಿಯನ್ನು ಕರೆದುಕೊಂಡು ಹೋದಲ್ಲಿ ವೈದ್ಯರೇನಾದರೂ ಇಲ್ಲದಿದ್ದಲ್ಲಿ ಅಥವಾ ಅಲ್ಲಿರುವ ವೈದ್ಯರು ಚಿಕಿತ್ಸೆ ನೀಡಲು ಸೂಕ್ತ ಸೌಲಭ್ಯ ಇಲ್ಲವೆಂದರೆ ರೋಗಿಯನ್ನು ದೂರದ ಜಿಲ್ಲಾ ಆಸ್ಪತ್ರೆಗೂ ಸಾಗಿಸಬೇಕು. ಇಷ್ಟರಲ್ಲೇನಾದರೂ ಅನಾಹುತ ಸಂಭವಿಸಿದರೆ, ಅಥವಾ ಸ್ಥಿತಿ ಗಂಭೀರವಾದರೆ ಅದರ ಜವಾಬ್ದಾರಿ ಕೂಡ ಇವರೇ ಹೊರಬೇಕು. ಒಂಟಿಯಾಗಿ ರಾತ್ರಿ ಹಗಲೆನ್ನದೆ ತಿರುಗಬೇಕಿರುವ ಇವರಿಗೆ ಸೂಕ್ತ ರಕ್ಷಣೆಯೂ ಇಲ್ಲ.ಇಷ್ಟು ವಿಷಮ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಇವರಿಗೆ ಕನಿಷ್ಠ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಎರಡು ಸರ್ಕಾರಗಳೂ ಸೇರಿ ₹ 12,000 ವೇತನ ಜಾರಿಗೊಳಿಸಿ, ‘ಡಿ’ ಗ್ರೂಪ್ ನೌಕರರೆಂದು ಪರಿಗಣಿಸಿ ಕೆಲಸ ಕಾಯಂ ಮಾಡಬೇಕು. ಮಾನವೀಯ ದೃಷ್ಟಿಯಿಂದಾದರೂ ಆಶಾಗಳ ಕಷ್ಟಗಳನ್ನು ಕಣ್ಣುಬಿಟ್ಟು ನೋಡಬೇಕು. ಕಿವಿಗೊಟ್ಟು ಕೇಳಬೇಕು.


– ಡಿ. ನಾಗಲಕ್ಷ್ಮಿ
ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ

 

ಆಶಾ ಕಾರ್ಯಕರ್ತೆಯರ ಅಂಕಿಅಂಶ

ರಾಜ್ಯದಲ್ಲಿರುವವರ ಸಂಖ್ಯೆ– 39,000ಕ್ಕೂ ಹೆಚ್ಚು

ಪರಿಶಿಷ್ಟ ಜಾತಿಯವರು– 9,000

ಪರಿಶಿಷ್ಟ ಪಂಗಡವರು– 4,000

ಹಿಂದುಳಿದ ಜಾತಿಗೆ ಸೇರಿದವರು– 13,000

ಅಲ್ಪಸಂಖ್ಯಾತರು– 3,000

ಇತರರು– 10,000

ಸ್ವಂತ ಮನೆ ಇಲ್ಲದವರು– 10,000ಕ್ಕೂ ಹೆಚ್ಚು

(ಮಾಹಿತಿ– ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ)

ಹೋರಾಟದ ಯಶೋಗಾಥೆ!

*2009 ಡಿ. 22: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನ ಬನಪ್ಪ ಪಾರ್ಕ್‍ನಲ್ಲಿ ನಡೆದ ಪ್ರಥಮ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ 20ಕ್ಕೂ ಹೆಚ್ಚು ಜಿಲ್ಲೆಗಳ 5,000ಕ್ಕೂ  ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಂದು ರಾಜ್ಯ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಸಮಾವೇಶದ ಸ್ಥಳಕ್ಕೆ ಬಂದು, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಪ್ರೋತ್ಸಾಹ ಧನ ಪಾವತಿಯಲ್ಲಿ ಆಗುತ್ತಿರುವ ವಿಳಂಬ, ಬಾಕಿ ಪಾವತಿ ಮತ್ತು ಕಡಿತಕ್ಕೆ ಸಂಬಂಧಿಸಿದ ಕೆಲವು ತುರ್ತು ಬೇಡಿಕೆಗಳನ್ನು ಸ್ಥಳದಲ್ಲೇ ಪರಿಹರಿಸಿ ಆ ದಿನವೇ  ಇಲಾಖೆಯಿಂದ ಆದೇಶ ಹೊರಬಿದ್ದಿತ್ತು.

* 2010ರ ಆಗಸ್ಟ್ 18: ಆರೋಗ್ಯ ಇಲಾಖೆ ಕೆಲವು ಕಠಿಣ ನಿರ್ಬಂಧಗಳೊಂದಿಗೆ ಪ್ರೋತ್ಸಾಹಧನ ಕಡಿತ ಮಾಡಿದೆಎಂದು ಆರೋಪಿಸಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ರ‍್ಯಾಲಿ. ಸರ್ಕಾರ ತನ್ನ ಪರವಾಗಿ ಹೋರಾಟದ ಸ್ಥಳಕ್ಕೆ ಎನ್.ಆರ್.ಹೆಚ್.ಎಂ ಅಭಿಯಾನ ನಿರ್ದೇಶಕರಾದ  ಎಸ್.ಸೆಲ್ವಕುಮಾರ್ ಮತ್ತು ಯೋಜನಾ ನಿರ್ದೇಶಕ ಮೋಹನ್‍ರಾಜ್‍ರವರನ್ನು ಕಳುಹಿಸಿಕೊಟ್ಟಿತು. ಅದೇ ಸಭೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರ, ಬಸ್‍ಪಾಸ್ ಇವುಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಲಾಯಿತು. ಇಲಾಖೆಯಿಂದ ತರಲಾದ ತಿದ್ದುಪಡಿ ಆದೇಶವನ್ನು ಹಿಂತೆಗೆದುಕೊಂಡು ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ಫಲಾನಿಭವಿಗಳೆಂದು ತಾರತಮ್ಯ ಮಾಡದೆ ಎಲ್ಲ ವರ್ಗದ ಗರ್ಭಿಣಿ ಮಹಿಳೆಯರನ್ನು ಹೆರಿಗೆಗೆ ಕರೆದೊಯ್ಯುವ ಅವಕಾಶ ನೀಡಲಾಯಿತು. ಗರ್ಭಿಣಿಯೊಂದಿಗೆ 48 ಗಂಟೆ ಆಶಾ ಕಾರ್ಯಕರ್ತೆ ಇರಬೇಕು ಎನ್ನುವ ಆದೇಶವನ್ನು ಹಿಂತೆಗೆದುಕೊಳ್ಳಲಾಯಿತು. ಹೊಸ ಆದೇಶದಿಂದ ಕಡಿಮೆಯಾದ ₹ 200 ಪ್ರೋತ್ಸಾಹಧನ ಸರಿದೂಗಿಸಲು ಹೊಸ ಸೇವೆಗಳ ಸೇರ್ಪಡೆ

* 2011 ಜೂನ್ 24-26: ಪ್ರೋತ್ಸಾಹ ಧನದಲ್ಲಿ ಕಡಿತ ಮಾಡಿ ಹಾಗೂ ಕೆಲವು ಕೆಲಸಗಳನ್ನು ಕೈಬಿಟ್ಟು, ಹೊಸ ಆಶಾ ಮಾರ್ಗಸೂಚಿ ಆದೇಶವನ್ನು 2011ರ ಮೇ 25ರಂದು ಹೊರಡಿಸಲಾಗಿತ್ತು. ಇದನ್ನು ವಿರೋಧಿಸಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರಬಲ ಹೋರಾಟ.  ಹೋರಾಟ ತೀವ್ರತೆ ಅರಿತ ಸರ್ಕಾರ ಸಂಘದ ನಾಯಕರೊಂದಿಗೆ 28-06-2011ರ ಜೂನ್‌ 28ರಂದು ಸಭೆ ನಡೆಸಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಮೇ 25ರ ಹೊಸ ಆದೇಶದಲ್ಲಿ ಕಡಿತ ಮಾಡಲಾಗಿದ್ದ ಕಾರ್ಯಕ್ರಮಗಳನ್ನು ಮತ್ತೆ ಜಾರಿಗೊಳಿಸಲಾಯಿತು.

* 2012ರ ಜೂನ್ 30: ಜೀವನ ಯೋಗ್ಯ ಮಾಸಿಕ ವೇತನ, ಸಾಮಾಜಿಕ ಭದ್ರತೆಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ಸಮಾವೇಶ.

*  2013 ಮಾರ್ಚ್ 12: ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ರಾಜ್ಯ ಸಚಿವ  ಸುದೀಪ್ ಬಂದೋಪಾದ್ಯಾಯ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಜೀವನ ಯೋಗ್ಯ ಮಾಸಿಕ ವೇತನ, ಆರೋಗ್ಯ ರಕ್ಷಣೆಗೆ ಹಾಗೂ ತೀವ್ರವಾದ ಮಾರಣಾಂತಿಕ ಕಾಯಿಲೆಗೆ ಆಶಾಗಳು ಒಳಗಾದಾಗ ಉಚಿತ ಚಿಕಿತ್ಸೆ ಸೇರಿದಂತೆ ಆರ್ಥಿಕ ನೆರವು ನೀಡಲು ಮನವಿ

* 2013ರ ಜುಲೈ 8: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಅಗ ಆರೋಗ್ಯ ಮಂತ್ರಿಯಾಗಗಿದ್ದ ಯು.ಟಿ. ಖಾದರ್  ಅವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ‘ಮಾಸಿಕ ವೇತನ’ ನಿಗದಿಪಡಿಸಬೇಕು ಮತ್ತು ಈ ವಿಷಯವನ್ನು 2014-15ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಬೇಕೆಂದು ಒತ್ತಾಯಿಸಿ ಮನವಿ

*  2013ರ ಜುಲೈ 12:  2013-2014ರ ಸಾಲಿನ ರಾಜ್ಯ ಬಜೆಟ್‍ನಲ್ಲಿ ‘ಆಶಾ’ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನಕ್ಕೆ ಸರಿಸಮ ರಾಜ್ಯ ಸರ್ಕಾರದಿಂದ ಮ್ಯಾಚಿಂಗ್ ಗ್ರ್ಯಾಂಟ್ಸ್ ಘೋಷಣೆ

* 2013ರ ಆಗಸ್ಟ್‌26: ಮಾಸಿಕ ವೇತನ ನಿಗದಿಗಾಗಿ, ಬಜೆಟ್‍ನಲ್ಲಿ ಘೋಷಿತ ಹೆಚ್ಚುವರಿ ಹಣ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಪುರಭವನದಲ್ಲಿ ರಾಜ್ಯಮಟ್ಟದ ಸಮಾವೇಶ

* 2014ರ ಜೂನ್‌ 18: ಬಜೆಟ್‌ನಲ್ಲಿ ಘೋಷಿಸಿದಂತೆ 2013ರ ನವೆಂಬರ್‌ನಿಂದ ಮಾರ್ಚ್ 2014ರ ಮಾರ್ಚ್‌ವರೆಗೆ ಮ್ಯಾಚಿಂಗ್ ಗ್ರ್ಯಾಂಟ್ಸ್ (ಪ್ರೋತ್ಸಾಹಧನ) ₹ 2,900 ಒಂದು ಕಂತನ್ನು ನೀಡಲು ಎಲ್ಲಾ ಜಿಲ್ಲೆಗಳಿಗೆ ಹಣ ಬಿಡುಗಡೆ

* 2014ರ ಜುಲೈ 11: ಆಶಾಗಳ ಹೋರಾಟಕ್ಕೆ ಸಿಕ್ಕ ಅಮೋಘ ಯಶಸ್ಸು. ದೇಶದಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರ್ಕಾರ ನೀಡುವಷ್ಟೇ ಸರಿಸಮನಾದ ರಾಜ್ಯ ಸರ್ಕಾರದ ಪ್ರೋತ್ಸಾಹಧನ. ₹ 10.67 ಕೋಟಿ ಮೊತ್ತದ ‘ಸಾಂಕೇತಿಕ’ ಚೆಕ್‍ ರಾಜ್ಯದ ಆಶಾ ಕಾರ್ಯಕರ್ತೆಯರ ಪರವಾಗಿ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿಗೆ ಮುಖ್ಯಮಂತ್ರಿಯಿಂದ ಹಸ್ತಾಂತರ.

* 2014 ಆಗಸ್ಟ್ 30: ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ರಾಜ್ಯ ಸಚಿವ ಎ. ಎಚ್. ಚೌಧರಿಗೆ ಮನವಿ

* 2014ರ ಅ.10: ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ. ಸ್ಥಳಕ್ಕೆ ಬಂದ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ ಆಗಮನ.  ಬಾಕಿ ಇರುವ ಮ್ಯಾಚಿಂಗ್ ಗ್ರ್ಯಾಂಟ್‌ 15 ದಿನಗಳಲ್ಲಿ ಬಿಡುಗಡೆ, ಸಿಮ್-ಕರೆನ್ಸಿ ಸೌಲಭ್ಯ, ವರ್ಷಕ್ಕೆ 4 ಸಮವಸ್ತ್ರ ಸೌಲಭ್ಯ ವಿತರಿಸುವ ಭರವಸೆ

* 2014ರ ಆ 17: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‍ಗೆ ಬೆಂಗಳೂರಿನಲ್ಲಿ ‘ಜೀವನ ಯೋಗ್ಯ ಮಾಸಿಕ ವೇತನ ಮತ್ತು ಸಾಮಾಜಿಕ ಭದ್ರತೆಗಾಗಿ’ ಮನವಿ.

* 2015ರ ಮೇ 1ರಿಂದ 11: ಒಂದು ವರ್ಷದ ಬಾಕಿ ಮ್ಯಾಚಿಂಗ್ ಗ್ರ್ಯಾಂಟ್ ಬಿಡುಗಡೆಗೆ ಆಗ್ರಹಿಸಿ ‘ಕೆಲಸ ನಿಲ್ಲಿಸಿ’ ಪ್ರತಿಭಟನೆ. ನಂತರ ಇಲಾಖೆಯಿಂದ ಪ್ರತಿ ಆಶಾಗೆ ₹ 14,300 ಜಮೆ.

* 2015ರ ಅ. 5ರಿಂದ 19: ಮ್ಯಾಚಿಂಗ್ ಗ್ರ್ಯಾಂಟ್‌ನ ಬಾಕಿ ಬಿಡುಗಡೆಗೆ ಆಗ್ರಹಿಸಿ ಮತ್ತೆ ‘ಕೆಲಸ ನಿಲ್ಲಿಸಿ’ ಪ್ರತಿಭಟನೆ. ₹ 100 ಕೋಟಿಯಷ್ಟು ಹಣ ಬಿಡುಗಡೆಯ ಬಳಿಕ ಚಳುವಳಿ ವಾಪಾಸು

* 2016ರ ಡಿಸೆಂಬರ್‌ 16: ಸುಮಾರು 20,000 ಕಾರ್ಯರ್ತೆಯರು ಭಾಗಿ. ನಿಗದಿತ ಮಾಸಿಕ ಗೌರವಧನ ಹೋರಾಟಕ್ಕೆ ಜಯ

* 2016ರ ಡಿ. 29: ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿಯ ವಾಜಪೇಯಿ ಆರೋಗ್ಯಶ್ರೀ ಮತ್ತು ರಾಜೀವ್ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಉಚಿತ ಆರೋಗ್ಯ ಸೇವೆ.

* 2017ರ ಸೆ. 7 ಮತ್ತು 8 ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಮುಷ್ಕರ. 25,000 ಕ್ಕೂ ಹೆಚ್ಚು ಕಾರ್ಯರ್ತೆಯರು ಭಾಗಿ. ₹ 3,500 ನಿಗದಿತ ಮಾಸಿಕ ವೇತನ ಮತ್ತು ಇತರ ಬೇಡಿಕೆ ಈಡೇರಿಸಲು ಒಪ್ಪಿಗೆ. ₹ 6,000 ವೇತನಕ್ಕಾಗಿ ಬೇಡಿಕೆ ಇಟ್ಟಿದ್ದ ಆಶಾ ಕಾರ್ಯಕರ್ತೆಯರಿಗೆ ₹ 3,500. ಮುಂದಿನ ಬಜೆಟ್‍ನಲ್ಲಿ ಇನ್ನಷ್ಟು ಹೆಚ್ಚಳ ಮಾಡುವ ಭರವಸೆ!

ಆಶಾಗಳ ಕೆಲಸದ ಪಟ್ಟಿ

* 12 ವಾರದೊಳಗೆ ಗರ್ಭಿಣಿಯರನ್ನು ನೋಂದಾಯಿಸಬೇಕು

* ಗರ್ಭಿಣಿ ಮಹಿಳೆಗೆ ನಿಗದಿತ ಅವಧಿಯೊಳಗೆ 100 ಕಬ್ಬಿಣಾಂಶದ ಮಾತ್ರೆ ನುಂಗಿಸಬೇಕು

* ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಸುರಕ್ಷಿತ ಹೆರಿಗೆ ಮಾಡಿಸಬೇಕು (ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅನುಕೂಲವಿಲ್ಲದಿದ್ದಲ್ಲಿ ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳವರೆಗೆ ಕರೆದೊಯ್ಯಬೇಕು)

* ಹೆರಿಗೆ ಬಳಿಕ 30 ದಿನದೊಳಗೆ ಆರು ಬಾರಿ ತಾಯಿ ಮತ್ತು ನವಜಾತ ಶಿಶುಗಳನ್ನು ಭೇಟಿ ಮಾಡಿ ತಪಾಸಣೆ ಮಾಡಬೇಕು.

* 2,000 ಗ್ರಾಂ ಒಳಗೆ ಇರುವ ಮಕ್ಕಳನ್ನು ಗುರುತಿಸಿ ಕುಟುಂಬ ವರ್ಗದವರಿಗೆ ಆ ಮಗುವನ್ನು ಪೋಷಣೆ ಮಾಡಲು ಮಾಹಿತಿ ನೀಡಿ ಚಿಕಿತ್ಸೆ ನೀಡಬೇಕು

* ಚುಚ್ಚುಮದ್ದು ಕಾರ್ಯಕ್ರಮದಲ್ಲಿ ಸೆಷನ್ ನಡೆಯುವ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ದು ಚುಚ್ಚುಮದ್ದು ಕೊಡಿಸಬೇಕು

* ಪ್ರತಿ ಮನೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಪ್ರೋತ್ಸಾಹ ನೀಡಬೇಕು

* ಗ್ರಾಮ ಮಟ್ಟದಲ್ಲಿ ಪ್ರತಿ ತಿಂಗಳು ನಡೆಯುವ ಗ್ರಾಮೀಣ ಆರೋಗ್ಯ ಮತ್ತು ಪೌಷ್ಟಿಕಾಂಶ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಮತ್ತು ಕಾರ್ಯಕ್ರಮ ಏರ್ಪಡಿಸಬೇಕು

* ನಿತ್ಯ ಮಾಡುವ ಕಾರ್ಯಕ್ರಮಗಳ ಬಗ್ಗೆ ಹಾಗೂ ಪ್ರೋತ್ಸಾಹಧನ ನೀಡುವ ಬಗ್ಗೆ ಮತ್ತು ಗ್ರಾಮ ನೈರ್ಮಲ್ಯ ಸಮಿತಿಗೆ ನೀಡಿರುವ ಮುಕ್ತ ನಿಧಿ ಉಪಯೋಗದ ಬಗ್ಗೆ ದಾಖಲಾತಿ ನಿರ್ವಹಿಸಬೇಕು

* ಪ್ರತಿ ವರ್ಷ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ದಾಖಲಾತಿ ನಿರ್ವಹಿಸಬೇಕು

* ಗ್ರಾಮ ನೈರ್ಮಲ್ಯ ಸಮಿತಿ ಸಭೆ ಆಯೋಜಿಸಿ ಎಲ್ಲ ಸದಸ್ಯರು ಹಾಜರಾಗುವಂತೆ ನೋಡಿಕೊಳ್ಳುವ ಜೊತೆಗೆ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಬೇಕು.

* ಪ್ರತಿ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ನಡೆಯುವ ಸಭೆಗೆ ಹಾಜರಾಗಿ ವರದಿ ನೀಡಬೇಕು

* ತಾನು ನಿರ್ವಹಿಸುವ ಗ್ರಾಮದಲ್ಲಿ 11 ರಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಕಬ್ಬಿಣಾಂಶ ಮಾತ್ರೆ ಕಡ್ಡಾಯವಾಗಿ ನುಂಗಿಸಬೇಕು

* ನವಜಾತ ಶಿಶುಗಳಿಗೆ ಅರ್ಧ ತಾಸಿನ ಒಳಗೆ ಕಡ್ಡಾಯವಾಗಿ ತಾಯಿ ಎದೆ ಹಾಲು ಉಣಿಸಲು ಪ್ರೋತ್ಸಾಹಿಸಬೇಕು

* ವಯೋಮಾನಕ್ಕೆ ಅನುಗುಣವಾಗಿ ಮಕ್ಕಳಿಗೆ ಕಡ್ಡಾಯವಾಗಿ ಚುಚ್ಚುಮದ್ದು, ಲಸಿಕೆ ಹಾಕಿಸಬೇಕು

* ಚುಚ್ಚುಮದ್ದಿನಿಂದ ಅಡ್ಡ ಪರಿಣಾಮ ಉಂಟಾದರೆ ವರದಿ ನೀಡಿ ಚಿಕಿತ್ಸೆ ಕೊಡಿಸಬೇಕು

* ತಾಯಿ ಅಥವಾ ಶಿಶು ಮರಣ ಹೊಂದಿದ ಬಗ್ಗೆ 24 ಗಂಟೆಯೊಳಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಿಗೆ ವರದಿ ನೀಡಬೇಕು

* ಜನನ ಮರಣಗಳ ದಾಖಲಾತಿ

* ಕುಟುಂಬ ಯೋಜನೆಯ ವಿವಿಧ ವಿಧಾನಗಳ ಬಗ್ಗೆ ತಿಳುವಳಿಕೆ ಮತ್ತು ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಿಸಬೇಕು.

*ಇಲಾಖೆಯ ಸಭೆ, ತರಬೇತಿ, ಕಾರ್ಯಕ್ರಮ, ಜಾಥಾದಲ್ಲಿ ಪಾಲ್ಗೊಳ್ಳಬೇಕು

* ತಿಂಗಳಲ್ಲಿ ನಿರಂತರವಾಗಿ ಒಂದಿಲ್ಲೊಂದು ಸರ್ವೇ ಮಾಡಬೇಕು.

ಬಹುಮುಖ್ಯ ಬೇಡಿಕೆಗಳು

*ಗೌರವ ಧನವನ್ನು ಕನಿಷ್ಠ ವೇತನ ಕಾಯ್ದೆಯಂತೆ ₹ 12,000ಕ್ಕೆ ಹೆಚ್ಚಿಸಬೇಕು.

* ಆಶಾಗಳನ್ನು ‘ಡಿ’ ಗ್ರೂಪ್ ನೌಕರರೆಂದು ಘೋಷಿಸಿ, ಆರೋಗ್ಯ ಇಲಾಖೆಯಲ್ಲಿ ವಿಲೀನಗೊಳಿಸಬೇಕು. ಅಲ್ಲಿಯವರೆಗೆ ಕನಿಷ್ಠ ವೇತನ ನೀಡಬೇಕು

* ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯ ನೀಡಬೇಕು.

* ಜೀವನ ಯೋಗ್ಯ ಮಾಸಿಕ ವೇತನ ನಿಗದಿಯಾಗುವವರೆಗೆ, ಎಲ್ಲಾ ಕಾಂಪೋನೆಂಟ್‍ಗಳ ಪ್ರೋತ್ಸಾಹ ಧನ ತಕ್ಷಣ ಹೆಚ್ಚಿಸಬೇಕು. (2005ರಲ್ಲಿ ಯೋಜನೆ ಆರಂಭವಾದಾಗ ಪ್ರೋತ್ಸಾಹಧನ ನಿಗದಿ ಆಗಿತ್ತು .ಅಲ್ಲಿಂದ ಇಲ್ಲಿಯವರೆಗೆ ಹೆಚ್ಚಳವಾಗಿಲ್ಲ)

* ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಮರಣ ಪರಿಹಾರ ಮತ್ತು ತೀವ್ರ ಕಾಯಿಲೆಗಳಿಗೆ ಸಹಾಯಧನ ನೀಡಬೇಕು

* ಆಶಾಗಳು ತಮ್ಮ ಅಲೆದಾಟದ ಕೆಲಸಗಳನ್ನು ಇನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಪ್ರತಿ ಆಶಾ ಕಾರ್ಯಕರ್ತೆಯರಿಗೆ ಸ್ಕೂಟರ್ ನೀಡಬೇಕು.

ರಾಜ್ಯ ಸರ್ಕಾರದಿಂದ ಸಿಕ್ಕ ಭರವಸೆಗಳು!

* ₹ 6,000  ಮಾಸಿಕ ವೇತನಕ್ಕಾಗಿ ಬೇಡಿಕೆ ಇಟ್ಟಿದ್ದ ಆಶಾ ಕಾರ್ಯಕರ್ತೆಯರಿಗೆ ಈಗ ₹ 3,500 ನಿಗದಿಯಾಗಿದೆ. ಇದೇ ಬಜೆಟ್ ನಲ್ಲಿ ಇನ್ನಷ್ಟು ಹೆಚ್ಚಳ ಮಾಡುವ ಭರವಸೆ.

* ‘ರಾಜೀವ್ ಗಾಂಧಿ ವಸತಿ ಯೋಜನೆ’ಯಲ್ಲಿ ಮನೆ ನಿರ್ಮಿಸಿಕೊಳ್ಳಲು ₹ 2 ಲಕ್ಷ ನೀಡುವಂತೆ ವಸತಿ ಸಚಿವರಿಗೆ ಪ್ರಸ್ತಾವ. ಶೀಘ್ರದಲ್ಲಿ ಯೋಜನೆ ಜಾರಿಗೊಳಿಸುವ ಭರವಸೆ.

* ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಮರಣ ಪರಿಹಾರ ಮತ್ತು ತೀವ್ರ ಕಾಯಿಲೆಗಳಿಗೆ ಸಹಾಯಧನ ನೀಡಲು ಬಜೆಟ್‍ನಲ್ಲಿ ಹಣ ಮೀಸಲಿಡುವ ಭರವಸೆ.

* ಆಶಾ ಸಾಫ್ಟ್‌ನಿಂದ ಉಳಿದ ಹಿಂಬಾಕಿ ಹಣ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ತಲುಪಿಸುವಂಥ ವ್ಯವಸ್ಥೆ ಮಾಡಿ, ಆಶಾ ಸಾಫ್ಟ್ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳುವ ಭರವಸೆ

* ಆಶಾ ಕಾರ್ಯಕರ್ತೆಯರ ಸ್ವಸಹಾಯ ಗುಂಪು ರಚಿಸಿ, ಗುಂಪಿಗೆ ತಲಾ ₹ 2 ಲಕ್ಷ ಬಡ್ಡಿರಹಿತ ಸಾಲ ನೀಡುವ ಭರವಸೆ.

* ಉಚಿತ ಬಸ್ ಪಾಸ್ ನೀಡುವ ಭರವಸೆ.